ದಖನ್ ಪ್ರಸ್ಥಭೂಮಿಯಲ್ಲಿ ಮಹಾರಾಷ್ಟ್ರದ ಬುಲ್ಡಾನ್ ಜಿಲ್ಲೆಯ ಲೋನಾರ್ ಪಟ್ಟಣದಿಂದ 1 ಕಿಮೀ ದೂರದಲ್ಲಿ ವೃತ್ತಾಕಾರದ ತಗ್ಗಿನಲ್ಲಿರುವ ಭೂವೈe್ಞÁನಿಕ ಮಹತ್ವ ಪಡೆದ ಉಪ್ಪು ನೀರಿನ ಸರೋವರ. ಆಳ 91 ಮೀ, ವ್ಯಾಸ 1.6 ಕಿಮೀ. ಸುತ್ತಲೂ ಕರಿಬಣ್ಣದ ಬೆಸಾಲ್ಟ್‍ಶಿಲೆಯ ದಿಮ್ಮಿಗಳಿಂದ ರಚಿತವಾದ ಅಂಚು ಮತ್ತು ತಳದಲ್ಲಿ ಹೆಚ್ಚು ಆಳವಿಲ್ಲದ ಉಪ್ಪುನೀರಿನ ಹರವು ಇದೆ. ಈ ನೀರಿನಲ್ಲಿರುವ ಮುಖ್ಯ ಲವಣ ಸೋಡಿಯಮ್ ಕಾರ್ಬೊನೇಟ್. ಇದರ ಜೊತೆಗೆ ಸೋಡಿಯಮ್ ಕ್ಲೋರೈಡ್ (ಸಾಮಾನ್ಯ ಉಪ್ಪು) ಕೂಡ ಸ್ವಲ್ಪ ಬೆರೆತುಕೊಂಡಿದೆ. ಈ ಲವಣಗಳು ಸರೋವರದ ಸುತ್ತಮುತ್ತಲಿನ ಶಿಲೆಗಳ ರಾಸಾಯನಿಕ ಶಿಥಿಲತೆಯಿಂದ ಉಂಟಾದವೆಂದು ಭಾವಿಸಲಾಗಿದೆ. ಬೇಸಗೆಯಲ್ಲಿ ನೀರು ಬತ್ತಿಹೋದಾಗ ಉಪ್ಪಿನ ಪದರುಗಳು ಕಾಣಬರುತ್ತವೆ. ಈ ಪ್ರದೇಶದಲ್ಲಿಯ ಜ್ವಾಲಾಮುಖಿಯೊಂದರ ಕ್ರಿಯೆಯ ಕೊನೆಯ ಹಂತದಿಂದಾಗಿ ಉಂಟಾದ ಅಗ್ನಿಪರ್ವತ ಕುಂಡವೇ ಈ ಸರೋವರ ಎಂದು ಭಾವಿಸಲಾಗಿತ್ತು. ಸರೋವರದ ತಳದಲ್ಲಿ ಹಲವು ಸಾವಿರ ಟನ್ನುಗಳಷ್ಟು ಮೊತ್ತದ ಕ್ಷಾರೀಯ ಸೋಡಿಯಮ್ ಲವಣಗಳು (ಕಾರ್ಬೊನೇಟ್, ಬೈಕಾರ್ಬೊನೇಟ್ ಮತ್ತು ಸಲ್ಫೇಟ್) ಇವೆ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ